ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲು! | Janata news
ಮಡಿಕೇರಿ : ಕೊಡಗಿನಲ್ಲಿ ಕೊಡವರೂ ಗೋಮಾಂಸ ತಿನ್ನುತ್ತಾರೆ ಎಂದು ಹೇಳಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 157 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಮಡಿಕೇರಿ ತಾಲೂಕಿನ ಮುಕ್ಕೋಡ್ಲಿನ ನಿವಾಸಿ ಆಗಿರುವ ಹಾಗು ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರು 2020 ರ ಡಿಸೆಂಬರ್ 21 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿದ್ದರು. ಆದರೆ, ಇದುವರೆಗೆ ಎಫ್‍ಐಆರ್ ದಾಖಲಾಗಿರಲಿಲ್ಲ. ಕೊನೆಗೂ ದೂರಿನ ಆಧಾರದಲ್ಲಿ ಪೊಲೀಸರು ಸಿದ್ದರಾಮಯ್ಯ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ನ ಐಸಿಸಿಸಿ ವಕ್ತಾರರಾಗಿರುವ ಜಿಲ್ಲೆಯವರೇ ಆದ ಬಿಜ್ರೇಶ್ ಕಾಳಪ್ಪ, ಸಿದ್ದರಾಮಯ್ಯ ಅವರು ಹಂದಿ ಮಾಂಸ ಹೇಳಲು ಹೋಗಿ ದನದ ಮಾಂಸ ಅಂತ ಹೇಳಿದ್ದಾರೆ. ಅದು ಉದ್ದೇಶಪೂರ್ವಕವಾಗಿ ಹೇಳಿರುವ ಹೇಳಿಕೆ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.